ಬೆಂಗಳೂರು, ಜನವರಿ 03: ಕರ್ನಾಟಕದಲ್ಲಿ ಅತ್ಯಧಿಕ ತೊಗರಿ ಬೆಳೆ ಬೆಳೆಯುವ ಜಿಲ್ಲೆಗಳ ಪೈಕಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯು ಒಂದು. ಇಲ್ಲಿ ರೈಲ್ವೆ ಡಿವಿಜನ್ (ವಿಭಾಗೀಯ ಕಚೇರಿ) ಆರಂಭಿಸಬೇಕು ಎಂಬುದು ಸುಮಾರು ನಾಲ್ಕು ದಶಕಗಳ ಕನಸು. ಈವರೆಗೂ ಈಡೇರದ ಕಾರಣ ಮತ್ತೆ ಆ ಬಗ್ಗೆ ಆಗ್ರಹಗಳು ಜೋರಾಗಿವೆ. ಈ ಬಾರಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರ ಬಳಿಗೂ ಈ ಪ್ರಸ್ತಾವನೆ ಹೋಗಿದೆ.
ಹೌದು, ಕಲಬುರಗಿ ಭಾಗದ ಜನರು 1984ರಿಂದಲೂ ಇಲ್ಲೊಂದು ರೈಲ್ವೆ ಡಿವಿಜನ್ ಆರಂಭಿಸಬೇಕು ಎಂದು ಮನವಿ ಮಾಡುಲತ್ತಲೇ ಬಂದಿದ್ದಾರೆ. ಈ ಸಲ ಮತ್ತೆ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ (1984) ನ್ಯಾಯಮೂರ್ತಿ ಸರಿನ್ ಅವರು ಕಲಬುರಗಿಯಲ್ಲಿ ಡಿವಿಜನ್ ಆರಂಭಿಸುವಂತೆ ಕೋರಿ ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅವರೇ ಈ ಕನಸು ಮೊಳಕೆಯೊಡೆಯಲು ಕಾರಣರಾದವರು.
ಹಾಗಾದರೆ ಕಲಬುರಗಿ ರೈಲ್ವೆ ಡಿವಿಜನ್ ಏಕೆ ಬೇಕು? ಅದರ ಪ್ರಯೋಜನಗಳು ಏನು? ಯಾಕೆ ಇಲ್ಲಿನ ಜನರು ಈ ಪರಿ ಒತ್ತಾಯಿಸುತ್ತಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ.
ಜಿಲ್ಲೆಗೆ ರೈಲ್ವೆ ಡಿವಿಜನ್ ಏಕೆ ಬೇಕು ?
* ಪ್ರಯಾಣಿಕರಿಂದಲೇ ವರ್ಷಕ್ಕೆ ಕಲಬುರಗಿ ಜಿಲ್ಲೆ ಒಂದರಿಂದಲೇ ರೈಲ್ವೆ ಇಲಾಖೆಗೆ ಬರೋಬ್ಬರಿ 143.3 ಕೋಟಿ ಆದಾಯ ಪಾವತಿಯಾಗುತ್ತದೆ.
* ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳಿಂದ ರೈಲ್ವೆ ಇಲಾಖೆಯು ರೂಪಾಯಿ 927.3 ಕೋಟಿ ಆದಾಯ ಸಂಗ್ರಹಿಸುತ್ತದೆ.
* 2023-24ನೇ ಸಾಲಿನಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಿಂದಲೆ ಒಟ್ಟು ಬರೋಬ್ಬರಿ 108.1 ಕೋಟಿ ಆದಾಯ ಬಂದ ಕಾರಣ ನಿಲ್ದಾಣವು NSG -2 ಗೆ ಅರ್ಹತೆ ಪಡೆದುಕೊಂಡಿತು. ಕಲಬುರಗಿ ನಿಲ್ದಾಣ NSG -3 ಯಿಂದ NSG -2ಗೆ ಅರ್ಹತೆ ಪಡೆಯಿತು.
* ಪ್ರತಿದಿನ ಕಲಬುರಗಿ ಜಿಲ್ಲೆಯಿಂದ 1.48 ಕೋಟಿ ಪ್ರಯಾಣಿಕರು ರೈಲ್ವೆ ಮೂಲಕ ಪ್ರಯಾಣಿಸುತ್ತಿದ್ದಾರೆ ಮತ್ತು ಕೇವಲ ಕಲಬುರಗಿ ರೈಲು ನಿಲ್ದಾಣ1 ಕೋಟಿಗೂ ಹೆಚ್ಚು ಜನ ಪ್ರಯಾಣಿಸುತ್ತಾರೆ.
ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಆದರೆ ಪ್ರಯೋಜನವೇನು?
* ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯ ಕೊಟ್ಟಂತಾಗುತ್ತದೆ.
* ಕಲಬುರಗಿ ನಿಲ್ದಾಣದಿಂದ ಹೆಚ್ಚು ರೈಲುಗಳು ಸಂಚಾರ ಆರಂಭಿಸುತ್ತವೆ. ಸರಕು ಸಾಗಣೆ ಸರಳವಾಗುತ್ತದೆ.
* ಕಲಬುರಗಿ ಭಾಗದ ಭಾಗದ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ಸಿಕ್ಕಂತಾಗುತ್ತದೆ.
* ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಆಸ್ಪತ್ರೆಗಳು ತಲೆ ಎತ್ತಿವೆ. ರೈಲ್ವೆ ಡಿವಿಜನ್ ಆದರೆ ಇದೊಂದು ಹಾಸ್ಪಿಟಲ್ ಹಬ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
* ಜಿಲ್ಲೆಯಲ್ಲಿ ಹೊಸ ಉದ್ಯಮಗಳು ತಲೆ ಎತ್ತಲು ಇದು ಸಹಕಾರಿ ಆಗಲಿದೆ. ಇದರಿಂದ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತದೆ. ಆರ್ಥಿಕವಾಗಿ, ಕೈಗಾರಿಕೆ ದೃಷ್ಟಿಯಿಂದಲೂ ಡಿವಿಜನ್ ಅಗತ್ಯವಿದೆ.